ಈಗ್ರೆಟ್  - 
ಸಿಕೋನೀಫಾರಮ್ಸ್ ಗುಂಪಿಗೆ ಸೇರಿದ ಬಲು ಸುಂದರ, ಗಂಭೀರ ಹೆರಾನ್ ಬಕಪಕ್ಷಿಗಳ ಹೆಸರು. ಗರಿ ಪುಕ್ಕಗಳೆಲ್ಲ ಅಚ್ಚಬಿಳಿ. ಕೊಕ್ಕು ಹಳದಿ. ನಡಿಗೆ, ಕುಣಿತ ಬಲು ಮೋದಕರ. ಈ ಆಕರ್ಷಣೆಯೇ ಪಕ್ಷಿಯ ದೊಡ್ಡ ಶತ್ರುವಾಯಿತು. ಮನುಷ್ಯ ಮೆಚ್ಚಿ ಪಕ್ಷಿಯನ್ನು ಬೆರಸಿ ಹಿಡಿದು ಕೊಂಡ. ಗರಿಗಳನ್ನು ಟೊಪ್ಪಿಗೆಗಳಿಗೆ ಉಡುಪುಗಳಿಗೆ ಅಲಂಕರಣ ಸಾಮಾಗ್ರಿಗಳಾಗಿ ಬಳಸಿಕೊಂಡ. ಹೀಗೆ ಅವ್ಯಾಹತವಾಗಿ ನಡೆದ ಈಗ್ರೆಟಿನ ಕೊಲೆಯಿಂದ ಅದರ ವಂಶವೇ ನಾಶವಾಗುವ ಸಂಭಾವ್ಯತೆ ಒದಗಿತ್ತು. ಆದರೆ ಜನರ ಅಲಂಕಾರಪ್ರಜ್ಞೆ ಬದಲಾಯಿತು. ಸರ್ಕಾರದ ಕಾಯಿದೆ ಕಾನೂನು ಬಿಗಿಗೊಂಡುವು. ಪರಿಣಾಮವಾಗಿ ಪಕ್ಷಿ ಅಳಿಯದೇ ಉಳಿದಿದೆ, ವೃದ್ಧಿಯೂ ಆಗುತ್ತಿದೆ. ಅದರ ದೈನ್ಯಸ್ಥಿತಿ ಕಂಡ ಫೌರ್‍ಬುಶ್ "ಈ ಪಕ್ಷಿಗಳು ಮಾನವನ ದುರಾಸೆಗೆ ಬಲಿಯಾಗಿ ಪಡಬಾರದ ಸಂಕಟ ಅನುಭವಿಸಿವೆ. ತಬ್ಬಲಿ ಮರಿಗಳು ನಿರಾಹಾರದಿಂದ ಅರಕ್ಷಣೆಯಿಂದ ಅಸು ನೀಗಿವೆ" ಎಂದಿದ್ದಾನೆ. ಪ್ರಪಂಚದ ಬೆಚ್ಚಗಿನ ಪ್ರದೇಶಗಳಲ್ಲಿ ವಾಸಿಸುವ ಈಗ್ರೆಟ್ಟಾ ಜಾತಿಯ (ಜೀನಸ್) ಹಕ್ಕಿಗಳಿವೆ ಸಾಮಾನ್ಯವಾಗಿ ಈಗ್ರೆಟ್ ಎಂಬ ಹೆಸರು. ಈ. ಗಾರ್ಜೆಟ್ಟಾ (ಸು. 22" ಉದ್ದ), ಕಾಸ್ಮೆರೋಡಿಯಸ್ ಆಲ್ಬಸ್ (ಅಥವಾ ಅಮೆರಿಕ ದೇಶದಲ್ಲಿ ಸಾಮಾನ್ಯ ಈಗ್ರೆಟ್ ಸುಮಾರು 35" ಉದ್ದ), ಡೆಮಿಗ್ರೆಟ್ಟಾ, ಲ್ಯೂಕೋ ಪೋಯ್ಕ್ಸ್ ತೂಲಾ (ಸುಮಾರು 24" ಉದ್ದ) ಇವೆಲ್ಲವೂ ಈಗ್ರೆಟ್ಟಾ ಜಾತಿಯಲ್ಲಿ ಸೇರಿವೆ. 

(ಜಿ.ಎಂ.ಬಿ.)
(ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ